ಜಪಾನೀ ಶಿಲ್ಪ-
ಜಪಾನಿನ ಶಿಲ್ಪಕಲೆಯ ಇತಿಹಾಸ ಆ ದೇಶದ ವಾಸ್ತು ಮತ್ತು ಚಿತ್ರಕಲೆಗಳ ಇತಿಹಾಸದ ಮಾದರಿಯಲ್ಲಿ ಪ್ರಾಕ್ತನ ಕಾಲಕ್ಕೆ ಸೇರಿದ ಜೊಮೊನ್ ಸಂಸ್ಕøತಿ ಕಾಲದಿಂದ ಪ್ರಾರಂಭವಾಗುತ್ತದೆ. ನವಶಿಲಾಯುಗದ ಈ ಸಂಸ್ಕøತಿಯ ಕಾಲ ಕ್ರಿ.ಪೂ. 1ನೆಯ ಸಹಸ್ರಮಾನ. ಆ ಕಾಲಕ್ಕೆ ಸೇರಿದ, ಸುಟ್ಟ ಜೇಡಿಮಣ್ಣಿನಿಂದ ಮಾಡಿದ, ಮಾತೃದೇವತೆ ಅಥವಾ ಬಹುಸಂತಾನೋತ್ಪಾದಕ ಸ್ತ್ರೀದೇವತೆಗಳ ಶಿಲ್ಪಗಳು ಆ ಕಾಲದ ವಿಶ್ವದ ಇತರೆಡೆಗಳ ಅಂಥ ಶಿಲ್ಪಗಳ ಸಾಲಿಗೆ ಸೇರುತ್ತವೆ. ಆ ಕಾಲದಲ್ಲಿ ಉತ್ತರ ಜಪಾನಿನ ಕೆಲವು ಭಾಗಗಳಲ್ಲಿ ಅಸ್ತಿತ್ವದಲ್ಲಿದ್ದ ಇತರ ಸಂಸ್ಕøತಿಗಳಿಗೆ ಸೇರಿದ, ಗಿಡ್ಡಾದ, ದುಂಡು ಕೈಗಳಿಂದಲೂ ದುಂಡಾದ ನಿತಂಬಗಳಿಂದಲೂ ಅಗಲವಾದ ಕಣ್ಣುಗಳಿಂದಲೂ ಕೂಡಿದ, ಮಡಕೆಗಳ ಆಕಾರದ, ವಿಕೃತ ಗೊಂಬೆಗಳೂ ಗಮನಾರ್ಹ. ಬಹುಶಃ ಆ ಶಿಲ್ಪಕೃತಿಗಳಿಗೆ ಈಗ ಉತ್ತರ ಜಪಾನಿನ ಹಾಕೈಡೋ ದ್ವೀಪವಾಸಿಗಳಾದ ಐನೂ ಜನಾಂಗ ಕಾರಣವಾಗಿದ್ದಿರಬಹುದು.
ಜಪಾನಿನಲ್ಲಿ ಅನಂತರ ಅನೂಚಾನವಾಗಿ ಬೆಳೆದು ಬಂದ ಶಿಲ್ಪಕಲೆಯ ಉಗಮ ಕ್ರಿಸ್ತಶಕದ ಪ್ರಾರಂಭಕಾಲದಲ್ಲಿ ಆದಂತೆ ಕಾಣುತ್ತದೆ. ಆದಿಕಾಲದ ಶಿಲ್ಪಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು: 1 ಏಷ್ಯ ಭೂಭಾಗದಿಂದ ಜಪಾನಿಗೆ ಬಂದ ಶಿಲ್ಪಗಳು, 2 ಅವುಗಳ ಅನುಕರಣೆಯಿಂದ ರಚಿಸಿದ ಶಿಲ್ಪಗಳು ಮತ್ತು 3 ಸ್ಥಳೀಯ ಶಿಲ್ಪಗಳು ಸ್ವಯಂಪ್ರೇರಣೆಯಿಂದ ರಚಿಸಿದ ಶಿಲ್ಪಗಳು.

ಹೊರಗಣ ಪ್ರಭಾವಗಳು ಬಂದದ್ದು ಮುಖ್ಯವಾಗಿ ಚೀನ, ಕೊರಿಯ ಮತ್ತು ಇಂಡೋಚೀನಗಳಿಂದ ಇದನ್ನು ಪ್ರತಿಬಿಂಬಿಸುವ ಮೊದಲ ಜಪಾನೀ ಶಿಲ್ಪಗಳೆಂದರೆ ಹನೀವ ಗೊಂಬೆಗಳು. ಸುಟ್ಟ ಜೇಡಿಮಣ್ಣಿನಿಂದ ಮಾಡಿದ ಕೊಳವೆಯಾಕಾರದ ಈ ಗೊಂಬೆಗಳನ್ನು ಸಮಾಧಿಗಳ ಸುತ್ತಲೂ ಮತ್ತಿತರ ಆತ್ಮಗಳ ರಕ್ಷಣೆಗಾಗಿ ವೃತ್ತಾಕಾರದಲ್ಲಿ ನೆಡಲಾಗುತ್ತಿತ್ತು. ಈ ಶಿಲ್ಪಗಳು ಮೇಲ್ಭಾಗದಲ್ಲಿ ಸಾಮಾನ್ಯವಾಗಿ ಮಾನವಾಕಾರದಲ್ಲಿ ಇದ್ದುವು. ಅಪರೂಪವಾಗಿ ಕುದುರೆ, ಪಕ್ಷಿ ಅಥವಾ ಮನೆಯ ಆಕಾರಗಳಲ್ಲೂ ಇದನ್ನು ಮಾಡುತ್ತಿದ್ದದ್ದುಂಟು. ಅನಂತರಕಾಲದ ಜಪಾನಿನ ಮರದ ಅಥವಾ ಜೇಡಿಮಣ್ಣಿನ ಶಿಲ್ಪಗಳು ಕೊಳವೆಯ ಆಕಾರದಲ್ಲಿರಲು ಹನೀವ ಗೊಂಬೆಗಳ ಪ್ರಭಾವವೇ ಕಾರಣ. ಇವುಗಳಲ್ಲಿ ಆಯುಧಧಾರಿ ಯೋಧ, ಸಂಗೀತವಾದ್ಯಗಾರ್ತಿಯರು, ಜೀನು ತೊಟ್ಟ ಕುದುರೆಗಳು ಮತ್ತು ಇತರ ಪ್ರಾಣಿಗಳನ್ನು ಬಹಳ ಸೂಕ್ಷ್ಮವಾಗಿ ರೂಪಿಸಲಾಗಿದೆ. ಹನೀವ ಶಿಲ್ಪಗಳು ಆಗಿನ ಕಾಲದ ಚೀನೀ ಶಿಲ್ಪಗಳನ್ನು ಹೋಲುವುದಾದರೂ, ಅವುಗಳ ವ್ಯತ್ಯಾಸಗಳೂ ಪ್ರಧಾನವಾಗಿ ಕಾಣುತ್ತವೆ.

ಅಸುಕ ಕಾಲ : 552-645. ಈ ಕಾಲದಲ್ಲಿ ಬೌದ್ಧಮತ ಜಪಾನಿಗೆ ಪ್ರವೇಶಿತು. ಮಾನವಾಕೃತಿಯ ಶಿಲ್ಪಗಳು ಹೆಚ್ಚು ಬಳಕೆಗೆ ಬಂದುವು. ಆದರೂ ಜಪಾನೀಯರಿಗೆ ಮಾನವಾಕೃತಿಯ ಶಿಲ್ಪಗಳ ತಯಾರಿಕೆ ಹೊಸದೇನೂ ಆಗಿರಲಿಲ್ಲ. ಮೊದಮೊದಲಿಗೆ ವಿದೇಶೀ ದೇವತಾಶಿಲ್ಪಗಳ ಬಗ್ಗೆ ವಿರೋಧವಿತ್ತು. ಕ್ರಮೇಣ ಬೌದ್ಧಧರ್ಮ ಅಲ್ಲಿ ಸ್ಥಿರವಾದಂತೆ, ಆ ಶಿಲ್ಪಗಳು ಹೆಚ್ಚು ಪ್ರಚಲಿತವಾದುವು. ಚೀನೀ ಭೂಭಾಗದಿಂದ ಜಪಾನಿಗೆ ಪ್ರವೇಶಿಸಿದ ಮಹಾಯಾನ ಪಂಥದ ದೇವತೆಗಳ ಶಿಲ್ಪಗಳು ಆಗಿನ ಶಿಲ್ಪಿಗಳ ಗಮನ ಸೆಳೆದುವು. ಸರಳವೂ ಸೌಮ್ಯವೂ ಆಹ್ಲಾದಕರವೂ ಆದ ಆ ಹೊಸ ಧರ್ಮ ಬೇಗನೆ ಜನರ ಮನಸ್ಸನ್ನು ಸೆರೆ ಹಿಡಿದುದರ ಫಲವಾಗಿ ಹೊಸ ಧರ್ಮದ ದೇವತಾಶಿಲ್ಪಗಳಿಗೆ ಬೇಡಿಕೆ ಹೆಚ್ಚಿತು. 593-628ರಲ್ಲಿ ಅಸ್ತಿತ್ವಕ್ಕೆ ಬಂದ ಸುಯಿಕೊ ಶೈಲಿಗೆ ಸೇರಿದ ಇಂಥ ಶಿಲ್ಪಗಳನ್ನು ಅಧಿಕ ಸಂಖ್ಯೆಯಲ್ಲಿ 607ರಲ್ಲಿ ನಿರ್ಮಿತವಾದ ಹೊರ್ಯೂಜಿ ಮಂದಿರದ ಪ್ರಧಾನ ಪೂಜಾ ಹಜಾರದಲ್ಲಿ ಕಾದಿರಿಸಲಾಗಿದೆ. ಅಂಥ ಶಿಲ್ಪಗಳಲ್ಲಿ, ಇಕ್ಕೆಲಗಳಲ್ಲೂ ನಿಂತ ಬೋಧಿಸ್ತತ್ವರ ನಡುವೆ ಕುಳಿತ ಷಾಕ (ಶಾಕ್ಯಮುನಿ) ಬುದ್ಧನ ಪ್ರತಿಮೆ ಧ್ಯಾನಮಗ್ನವಾದ ದೇವಮಾನವಾಕೃತಿಯಾಗಿ ಗಮನ ಸೆಳೆಯುತ್ತದೆ: ಕೊರಿಯ ದೇಶದವನಾದ ಟೊರಿ ಬುಷ್ಷಿ ಎಂಬ ಶಿಲ್ಪಿಯ ನೇತೃತ್ವದಲ್ಲಿ ಅದನ್ನು ಮಾಡಲಾಗಿದ್ದರೂ, ಆ ಶಿಲ್ಪದಲ್ಲಿ ಚೀನೀ ಪ್ರಭಾವಗಳು ಎದ್ದು ಕಾಣುತ್ತವೆ. ಇದೇ ಕಾಲಕ್ಕೆ ಸೇರಿದ ದಿಕ್ಪಾಲಕರ ದೇವತೆಗಳ ಮರದ ಶಿಲ್ಪಗಳೂ ಸುಂದರ ಕೃತಿಗಳು. ಪ್ರಾಚೀನ ಪರಂಪರೆಯ ಪ್ರಕಾರ ಕೊಳವೆಯ ಆಕಾರದ ಅಂಗಾಂಗಗಳುಳ್ಳ, ಮರದಲ್ಲಿ ನಿರ್ಮಿಸಲಾಗಿದ್ದರೂ ಕಂಚಿನ ಮುಲಾಮಿನಿಂದ ಲೇಪಿತವಾಗಿರುವ ಈ ಸತ್ತ್ವಪೂರ್ಣ ಶಿಲ್ಪಗಳು ಆಗಿನ ಕಲಾಪ್ರೌಢಿಮೆಗೆ ಉತ್ತಮ ನಿದರ್ಶನಗಳು. ಇವು ಪೂರ್ನ ದಿಕ್ಪಾಲಕ ಜಿಕೊಕು-ಟಿನ್, ಪಶ್ಚಿಮ ದಿಕ್ಪಾಲಕ ಕೊಮೊಕು-ಟಿನ್, ದಕ್ಷಿಣ ದಿಕ್ಪಾಲಕ ಜೊಕೊಟಿನ್ ಮತ್ತು ಉತ್ತರ ದಿಕ್ಪಾಲಕ ಟಮೊನ್‍ಟಿನ್‍ಗಳೆಂದು ಗುರುತಿಸಲಾಗಿದೆ. ಭಾರತೀಯ ಪರಂಪರೆಯ ದಿಕ್ಪಾಲಕರಾದ ಇಂದ್ರ, ವರುಣ, ಯಮ ಮತ್ತು ಕುಬೇರರೊಂದಿಗೆ ಅನುಕ್ರಮವಾಗಿ ಅವರನ್ನು ಹೋಲಿಸಬಹುದು. ವಿಗ್ರಹಗಳ ಮೇಲ್ಭಾಗದಲ್ಲಿರುವ ತೆರೆಗಳ ಮೇಲೆ ಪದ್ಮಪುಷ್ಟಗಳನ್ನು ಹಿಡಿದ, ಹಾರುತ್ತಿರುವ ಉಡುಪುಗಳನ್ನು ಧರಿಸಿದ, ಸಂಗೀತವಾದ್ಯಗಳನ್ನು ನುಡಿಸುತ್ತಿರುವ, ಬುದ್ಧ ದೇವನನ್ನು ಸ್ತುತಿಸುತ್ತಿರುವ ಅಪ್ಸರೆಯರ ಶಿಲ್ಪಗಳನ್ನು ರೂಪಿಸಲಾಗಿದೆ. ಮರದ ಈ ಎಲ್ಲ ಶಿಲ್ಪಗಳಿಗೂ ಬಣ್ಣಗಳನ್ನೂ ಲೇಪಿಸಲಾಗಿತ್ತು.

ಹೊರ್ಯೂಜಿಯ ಪ್ರಧಾನ ಪೂಜಾ ಹಜಾರದಲ್ಲಿ ಕಾದಿರಿಸಿರುವ ಆರು ಅಡಿ ಎತ್ತರದ ನಯವಾದ ಕ್ವಾನೋನ್ ಬೋಧಿಸತ್ತ್ವನ ಪ್ರತಿಮೆ ಬಹುಶಃ ಕೊರಿಯದ ಪೇಕ್ಬೆ ರಾಜ್ಯದ ದೊರೆ ನೀಡಿದ ಕೊಡುಗೆ, ಅದಕ್ಕೂ ಬಣ್ಣಗಳನ್ನು ಲೇಪಿಸಲಾಗಿತ್ತು. ಮರದಲ್ಲಿ ಕೆತ್ತಿರುವ ಮತ್ತೊಂದು ಕ್ವಾನೋನ್ ಪ್ರತಿಮೆಯನ್ನು ಬಳಿಯಿರುವ ಯುಮೆಡೊನೊ ಮಂದಿರದಲ್ಲಿ ಅನೇಕ ಶತಮಾನಗಳ ಕಾಲ ಗುಪ್ತವಾಗಿ ಕಾದಿರಿಸಲಾಗಿತ್ತು. ಕರುಣಾಮೂರ್ತಿ ಬೋಧಿಸತ್ತ್ವ ವಿಗ್ರಹಗಳಲ್ಲಿ ಅತ್ಯಂತ ಮನೋಹರವಾದ ಈ ಶಿಲ್ಪದ ಕಿರೀಟವನ್ನು ಬಹಳ ಅಂದವಾಗಿ ಕೆತ್ತಲಾಗಿದೆ.

ಕಂಚಿನ ಶಿಲ್ಪಗಳ ಮಾದರಿಯಲ್ಲಿ ಮರದಲ್ಲಿ ಕೆತ್ತಲಾದ ಮತ್ತೆ ಆರು ಕ್ವಾನೋನ್ ಶಿಲ್ಪಗಳನ್ನು ಆ ಮಂದಿರಲ್ಲಿ ರಕ್ಷಿಸಿ ಇಡಲಾಗಿದೆ. ಅವೂ ಆಗಿನ ಶಿಲ್ಪಗಳ ಕೌಶಲದ ಪ್ರತೀಕಗಳು. ಹೊರ್ಯೂಜಿ ಮಂದಿರಕ್ಕೆ ಸೇರಿದ 50 ಕಂಚಿನ ಪ್ರತಿಮೆಗಳ ಪೈಕಿ ಇರುವ ಹಲವು ಬುದ್ಧ ಬೋಧಿಸತ್ತ್ವ ವಿಗ್ರಹಗಳು ಗಮನಾರ್ಹವಾಗಿವೆ. ಅವುಗಳಲ್ಲಿ ಒಂದಾದ, ಸಿದ್ಧಾರ್ಥನ ಜನನವನ್ನು ನಿರೂಪಿಸುವ ಮಾಯಾದೇವಿಯ ಶಿಲ್ಪ ಅಪೂರ್ವವಾದ್ದು, ಆಕೆಯ ಉಡುಪಿನ ಬಲತೋಳಿನೊಳಗಿಂದ ದೇವಶಿಶು ಹೊರಬರುತ್ತಿರುವಂತೆ ರೂಪಿಸಲಾಗಿದೆ. ಈ ಶಿಲ್ಪಗಳನ್ನು 19ನೆಯ ಶತಮಾನದಲ್ಲಿ ರಾಜಮನೆತನಕ್ಕೆ ಕಾಣಿಕೆಯಾಗಿ ನೀಡಲಾಗಿತ್ತು. ಈಗ ಅವನ್ನು ಟೋಕಿಯೋದಲ್ಲಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಹೊರಿಂಜಿಯದಲ್ಲಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಹೊರಿಂಜಿಯದಲ್ಲಿರುವ ಮರದ ಬೋಧಿಸತ್ತ್ವ ವಿಗ್ರಹ ಅದೇ ಶೈಲಿಗೆ ಸೇರಿದ್ದು. ಇದು ಬಹಳ ದೊಡ್ಡದಾಗಿಯೂ ಘನವಾಗಿಯೂ ಇದೆ.

ಸುಯಿಕೊ ಶಿಲ್ಪಗಳಲ್ಲಿ ಪ್ರಾಚೀನ ಶಿಲ್ಪಶೈಲಿಗಳ ಲಕ್ಷಣಗಳು ಎದ್ದುಕಾಣುತ್ತವೆ. ಚೀನ ಕೊರಿಯಗಳ ಶಿಲ್ಪಕಲೆಯ ಪ್ರಭಾವಗಳೊಂದಿಗೆ ಪ್ರಾಚೀನ ಜಪಾನೀ ಲಕ್ಷಣಗಳು ಪ್ರತ್ಯೇಕಿಸಲು ಸಾಧ್ಯವಾಗದ ರೀತಿಯಲ್ಲಿ ಬೆರೆತುಕೊಂಡಿವೆ. ದೊಡ್ಡ ತಲೆ, ನಯವಾದ ನಗುಮುಖ, ಬಾದಾಮಿಯಾಕಾರದ ಕಣ್ಣುಗಳು, ಬೆಣೆಯಂಥ ಕತ್ತು ಮುಂತಾದ ಲಕ್ಷಣಗಳಿಂದ ಕೂಡಿದ ಈ ಶಿಲ್ಪಗಳ ಶೈಲಿ ಪಾಶ್ಚಾತ್ಯ ರೋಮನೆಸ್ಕ್ ಶೈಲಿಯನ್ನು ಹೋಲುತ್ತದೆ.

ಹಕುಹೋ ಕಾಲ : 645-710. 645ರ ಸುಮಾರಿನಲ್ಲಿ ಜಪಾನಿಗೆ ಪ್ರವೇಶಿಸಿದ ಕಾನ್‍ಫ್ಯೂಷಸ್ ಪಂಥ ಮತ್ತು ಟೈಯಿಕ್ವ ಸುಧಾರಣೆಗಳು ಬೌದ್ಧಮತದ ಜನಪ್ರಿಯತೆಗೆ ಅಡ್ಡಿಯಾಗಲಿಲ್ಲ. ಈ ಕಾಲದಲ್ಲೂ ಸುಯಿಕೊ ಶೈಲಿಯ ಶಿಲ್ಪಗಳು ಮುಂದುವರಿದು ಕ್ರಮೇಣ ಹೊಸ ಶೈಲಿಯೊಂದಿಗೆ ಸೇರಿಹೋದುವು. ಈ ಬದಲಾಗುತ್ತಿರುವ ಕಾಲಕ್ಕೆ ಸೇರಿದ, ಮರದಲ್ಲಿ ಕೆತ್ತಿದ ಗಮನಾರ್ಹ ಮಿರೊಕು ಬೊಸಟ್ಸು (ಮೈತ್ರೇಯ ಬುದ್ಧ) ಶಿಲ್ಪಗಳನ್ನು ಹಕುಹೋ ಶೈಲಿಯ ನಿದರ್ಶನಗಳೆಂದು ಕರೆಯಲಾಗಿದೆ. ಮೈತ್ರೇಯ ಬುದ್ಧಶಿಲ್ಪಗಳನ್ನು ಕಮಲ ಪುಷ್ಟಗಳ ಪೀಠಗಳ ಮೇಲೆ ರಾಜಲೀಲಾಸನ ಅಥವಾ ಲಲಿತಾಸನ ಮುದ್ರೆಯಲ್ಲಿ ಕುಳಿತಿರುವಂತೆ ಕೆತ್ತಲಾಗಿದೆ. ಇಂಥ ಒಂದು ಶಿಲ್ಪವನ್ನು ಹೊರ್ಯೂಜಿ ಮಂದಿರದ ಬಳಿ ಇರುವ ಚೂಗುಜಿ ಭಿಕ್ಷುಣಿಯರ ವಿಹಾರದಲ್ಲಿ ಇಟ್ಟಿದೆ.  ಇರುವ ಈ ಮೂರ್ತಿ ಎತ್ತರವಾದ ಪೀಠದ ಮೇಲೆ ಎಡಗಾಲನ್ನು ಕೆಳಗೆ ಇಳಿಬಿಟ್ಟು. ಬಲಗಾಲನ್ನು ಎಡಮೊಳಕಾಲಿನ ಮೇಲೆ ಇಟ್ಟುಕೊಂಡಿದೆ. ಎಡಗೈಯನ್ನು ಬಲಗಾಲಿನ ಮೇಲೆ ಊರಿದೆ. ಬಲಗೈ ಗದ್ದದ ಮೇಲಿದೆ. ಚಿಂತೆಯ ಭಾವವನ್ನು ತೋರಿಸುತ್ತದೆ. ಜಗತ್ತಿನ ತೊಂದರೆಗಳನ್ನು ನಿವಾರಿಸುವ ಭಾರವನ್ನು ಹೊತ್ತು ಚಿಂತಾಕುಲನಾದ ಭವಿಷ್ಯ ಬುದ್ಧನಾದ ಮೈತ್ರೇಯನ ಮೂರ್ತಿಶಿಲ್ಪಗಳು ಅಮೋಘ ಶಿಲ್ಪಕೃತಿಗಳು. ಇದು 7ನೆಯ ಶತಮಾನದ ಮಧ್ಯಭಾಗದ್ದೆಂದು ಭಾವಿಸಲಾಗಿದೆ.
ಚೀನದಲ್ಲಿ ಟಾಂಗ್ ವಂಶದ ಪ್ರಾರಂಭಕಾಲದಲ್ಲಿ ಆದ ಬದಲಾವಣೆಗಳ ಪ್ರಭಾವಗಳಿಂದ ಜಪಾನಿನ ಅಸುಕ ಕಾಲದಲ್ಲಿ ಶಿಲ್ಪಗಳಲ್ಲಿ ಕಂಡುಬರುತ್ತಿದ್ದ ಸರಳತೆ ಸೌಮ್ಯತೆಗಳು ಮಾಯವಾಗಿ ಕ್ರಮೇಣ ನೈಜತೆಯ ಅಭಾವ ತಲೆದೋರಲಾರಂಭಿಸಿತು. ದುಂಡಾದ ಮುಖ, ಉದ್ದವಾದ ಕೊಳವೆಗಳಂತೆ ಇರುವ ಕೈಗಳು, ಮನುಷ್ಯಗಾತ್ರದ ದೇಹ, ಸಮಾನಾಂತರ ಮಡಿಕೆಗಳುಳ್ಳ ಉಡುಪುಗಳು-ಇವು ಈ ಶಿಲ್ಪಗಳ ಪ್ರಧಾನ ಲಕ್ಷಣಗಳು. ಈ ಹೊಸ ಕಾಲದ ಶಿಲ್ಪಗಳ ಕೈಚಳಕವನ್ನು ನಿರೂಪಿಸುವ, ಆದರೂ ಮೊದಲಿನ ಘನತೆಯನ್ನು ಉಳಿಸಿಕೊಂಡು ಬಂದಿರುವ, ಶಿಲ್ಪಶೈಲಿಯ ಅತ್ಯತ್ತಮ ನಿದರ್ಶನವೆಂದರೆ ಷಿನ್‍ಯ ಕುಷಿಜಿಯಲ್ಲಿರುವ ಕಂಚಿನ ಸುವಾಸನಾ ಬುದ್ಧ. 

ಈ ಕಾಲದ ಶಿಲ್ಪಕಲೆಯ ಅತ್ಯುತ್ತಮ ನಿಧಿಯೆಂದರೆ ಹೊರ್ಯೂಜಿಯ ಶ್ರೀಮತಿ ಟಚಿಬನಳ ಮಂದಿರದಲ್ಲಿರುವ ಮೂರ್ತಿಗಳು. ಅವುಗಳಲ್ಲಿ ಪದ್ಮದ ಮೇಲೆ ಕುಳಿತ ಅಮಿದ (ಅಮಿತಾಭ) ಬುದ್ಧ, ಇಬ್ಬದಿಗಳಲ್ಲಿ ನಿಂತ ಕ್ವಾನೋನ್ ಮತ್ತು ಸೆಯಿಷಿ ಬೋಧಿಸತ್ತ್ವ ಮೂರ್ತಿಗಳು- ಈ ತ್ರಿಮೂರ್ತಿಸಮೂಹ ಅಪೂರ್ವ ಸೌಂದರ್ಯದಿಂದ ಕೂಡಿದ್ದು. ಅದರ ಹಿಂಬದಿಯ ತೆರೆಯೂ ಬುದ್ಧವಿಗ್ರಹದ ತಲೆಯ ಹಿಂಬದಿಯ ತೇಜೋವಲಯಗಳೂ ಬಹು ಸೂಕ್ಷ್ಮವಾದ ಕೆತ್ತೆನಗಳಿಂದ ಶೋಭಿಸುತ್ತವೆ. ಕಮಲಪುಷ್ಟಗಳ ಮೇಲೆ ಕುಳಿತ ಅಪ್ಸರಸ್ತ್ರೀಯರು ಮುಂಭಾಗದಲ್ಲಿರುವ ಬುದ್ಧನ ಸೇವೆಯಲ್ಲಿ ತೊಡದ್ದಂತೆ ತೆರೆಯ ಮೇಲೆ ಚಿತ್ರಿಸಲಾಗಿದೆ. ಕೇವಲ 2' ಎತ್ತರದ ಈ ತ್ರಿಮೂರ್ತ ಮಂಟಪಕ್ಕೆ ಕಂಚಿನ ಗಿಲೀಟು ಹಾಕಲಾಗಿದೆ.

ಅಸುಕ, ಹಕುಹೋ-ಈ ಎರಡೂ ಕಾಲಗಳ ಲಕ್ಷಣಗಳನ್ನು ಪ್ರತಿಬಿಂಬಿಸುವ, ಯಕುಷಿಜಿಯಲ್ಲಿರುವ 6' ಎತ್ತರದ ಕಂಚಿನ ಷೋ-ಕ್ವಾನೋನ್ ಶಿಲ್ಪ ಆ ಕಾಲದ ಅತ್ಯಂತ ದೊಡ್ಡ ಕೃತಿ. ಆ ಕಾಲಕ್ಕೆ ಸೇರಿದ ಇನ್ನೂ ದೊಡ್ಡದಾದ ಕೃತಿಯೊಂದಿತ್ತೆಂಬುದು ಕೋಫುಕುಜಿಯಲ್ಲಿ ದೊರಕಿದ. 3' ಎತ್ತರದ, ಬುದ್ಧನ ತಲೆಯ ಶಿಲ್ಪದಿಂದ ತಿಳಿದುಬರುತ್ತದೆ.
ನಾರಾ ಕಾಲ : 710-784. ಪ್ರಸಿದ್ಧ ಚಕ್ರವರ್ತಿ ಷೋಮ (724-749) ಮತ್ತು ಇತರರ ಆಶ್ರಯ ಪಡೆದ ಬೌದ್ಧ ಧರ್ಮ ಈ ಕಾಲದಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂತು. ಅಧಿಕ ಸಂಖ್ಯೆಯಲ್ಲಿ ನಿರ್ಮಿತವಾಗುತ್ತಿದ್ದ ಬೌದ್ಧ ಮಂದಿರಗಳಿಂದ ಪ್ರತಿಮೆಗಳಿಗಾಗಿ ಬೇಡಿಕೆ ಹೆಚ್ಚಿತು. ಇವಕ್ಕಾಗಿ ಹೊಸ ರಾಜಧಾನಿಯಾದ ನಾರಾದಲ್ಲಿದ್ದ ಶಿಲ್ಪಿಗಳು ಅತ್ಯಧಿಕ ಸಂಖ್ಯೆಯಲ್ಲಿ ಮರದ, ಕಂಚಿನ, ಸುಟ್ಟ ಮಣ್ಣಿನ ಮತ್ತು ಅರಗಿದ ಮೂರ್ತಿಗಳನ್ನು ತಯಾರಿಸಲಾರಂಭಿಸಿದರು. ಆ ಕಾಲದ ಜಪಾನೀ ಶಿಲ್ಪಕಲೆ ಚೀನದ ಟಾಂಗ್ ಕಾಲದ ಶಿಲ್ಪಕಲೆಯೊಂದಿಗೆ ಸ್ಪರ್ಧಿಸುವಂಥ ಮಟ್ಟ ತಲಪಿದ್ದುವೆಂದು ಹೇಳಬಹುದು. ಆಗ ನಿರ್ಮಿತವಾದ ನೂರಾರು ಬೌದ್ಧಶಿಲ್ಪಗಳಲ್ಲಿ ಬಹುಶಃ ಅಸಾಮಾನ್ಯವಾದ್ದೆಂದರೆ, ಇಕ್ಕೆಲಗಳಲ್ಲೂ 11' ಎತ್ತರದ ನಿಕೊ ಮತ್ತು ಗಕೊ ಬೋಧಿಸತ್ತ್ವದಿಂದ ಕೂಡಿದ, 9' ಎತ್ತರ ಇರುವ, ಕುಳಿತಿರುವ ಯಕುಷಿ ಬುದ್ಧನ ಅದ್ವಿತೀಯ ಶಿಲ್ಪ.

ಈ ಕಾಲದ ಶಿಲ್ಪಗಳು ದುಂಡಾಗಿ ಮಾಂಸಖಂಡಗಳಿಂದ ಉಬ್ಬಿದ ಶರೀರಲಕ್ಷಣ ಹೊಂದಿರುತ್ತವೆ. ಅವುಗಳ ಉದ್ದವೂ ಸಡಿಲವೂ ಆದ ಉಡುಪುಗಳ ಮಡಿಕೆಗಳು ಹರಿಯುವ ನೀರಿನ ಅಲೆಗಳಂತೆ ಸಹಜವಾಗಿವೆ. ಅವುಗಳ ಬೃಹದಾಕಾರ, ಆದರ್ಶ ಪ್ರಾಯವಾದ ಗಂಭೀರ ಮುಖಲಕ್ಷಣಗಳು ದೈವೀಭಾವನೆಗಳನ್ನು ಮೂಡಿಸುತ್ತವೆ. ತುಂಬು ಮುಖ, ಕಮಾನಿನಂಥ ಕಣ್ಣೆವೆ-ಇವು ಆ ಭಾವನೆಯನ್ನು ದ್ವಿಗುಣಗೊಳಿಸುತ್ತವೆ. ಬುದ್ಧ ಪ್ರತಿಮೆಗಳನ್ನುಳಿದು ಇತರ ಶಿಲ್ಪಗಳಲ್ಲಿ ಕಿರೀಟಗಳು ಸುಂದರ ಹಾಗೂ ನೈಜ. ಕಂಠಹಾರಗಳೂ ತೋಳ್ಬಂದಿಗಳೂ ಶರೀರದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಭಕ್ತಜನರ ಗಮನವನ್ನು ಸೆಳೆಯುವ ಚಿತ್ತಾಕರ್ಷಕ ಮುದ್ರೆಗಳಲ್ಲಿ ಪ್ರತಿಮೆಗಳನ್ನು ನಿರೂಪಿಸುವ ಕಲೆಯಲ್ಲಿ ಆ ಕಾಲದ ಶಿಲ್ಪಿಗಳು ನಿಷ್ಣಾಂತರಾಗಿದ್ದರು.

752ರಲ್ಲಿ ನಾರಾ ನಗರದ ಟೋಡೈಜಿ ಮಂದಿರಕ್ಕಾಗಿ ನಿರ್ಮಿಸಲಾದ 53 ಎತ್ತರದ ಕುಳಿತಿರುವ ಬುದ್ಧರೋಷಣ (ವೈರೋಚನ) ಮೂರ್ತಿ ಜಪಾನಿನ ಶಿಲ್ಪಕೃತಿಗಳಲ್ಲೇ ಅತ್ಯಂತ ಬೃಹತ್ತಾದ್ದು. ಇತರ ಎಲ್ಲ ಬುದ್ಧರಿಗಿಂತಲೂ ಮಿಗಿಲಾದ, ಅಗಣಿತ ಲೋಕಗಳನ್ನೊಳಗೊಂಡ ಪರಮವ್ಯೋಮದ ಅಧಿನಾಯಕನಾದ ಸೂರ್ಯಮಂಡಲಾಧಿಪತಿಯೆಂದು ಪರಿಗಣಿತನಾದ ರೋಷಣಬದ್ಧ ಮೂರ್ತಿಯ ನಿರ್ಮಾಣಕಾರ್ಯದಲ್ಲಿ ತಾಂತ್ರಿಕ ಕೌಶಲದ ಪರಮಾವಧಿಯನ್ನು ಬಳಸಿಕೊಂಡಿದ್ದಿರಬೇಕು. ಅನಂತರ ಸಂಭವಿಸಿದ ಬೆಂಕಿಯ ಅಪಘಾತದಲ್ಲಿ ಈ ಮೂರ್ತಿ ನಾಶವಾಯಿತು. ಅದೇ ಕಾಲಕ್ಕೆ ಸೇರಿದ ಮತ್ತು ಅದೇ ಮಂದಿರದಲ್ಲಿರುವ, ಕಂಚಿನ ದೀಪದ ಮೇಲಣ ಜಾಲರಿಯ ಮೇಲೆ ರೂಪಿಸಿರುವ, ಬೋಧಿಸತ್ತ್ವ ಚಿತ್ರಗಳು ಇಟಲಿಯ ಪುನರುಜ್ಜೀವನ ಯುಗದ ಶಿಲ್ಪಗಳಿಗೆ ಸಮನೆಂದು ವರ್ಣಿಸಲಾಗಿದೆ. ಕನಿಮಾನ್‍ಜಿಯ 8' 8" ಎತ್ತರದ, ಷಾಕ (ಶಾಕ್ಯಮುನಿ) ಬುದ್ಧನ ಶಿಲ್ಪಸೌಂದರ್ಯವೂ ಉಡುಪಿನ ಮಡಿಕೆಗಳನ್ನು ನಿರೂಪಿಸಿರುವ ಚಾತುರ್ಯವೂ ಗಮನಾರ್ಹ. ಇದು ಆ ಕಾಲದ ಪ್ರಮುಖ ಕಂಚಿನ ಶಿಲ್ಪಗಳಲ್ಲೊಂದು. ಟೋಡೈಜಿಯಲ್ಲಿರುವ, 1' 8" ಎತ್ತರದ ಶಿಶು ಬುದ್ಧ ವಿಗ್ರಹವೂ ಉತ್ತಮ ಕೃತಿ.

ಕಂಚಿನ ಶಿಲ್ಪಕಲೆಯ ಇಂಥ ಉಚ್ಛ್ರಾಯ ಕಾಲದಲ್ಲೂ ಜೇಡಿಮಣ್ಣಿನ ಪ್ರತಿಮೆಗಳೂ ತಯಾರಾಗುತ್ತಿದ್ದುವು. 711ರಲ್ಲಿ ಮಾಡಲಾದ, 60ಕ್ಕೂ ಹೆಚ್ಚಿನ ಜೇಡಿಮಣ್ಣಿನ ಸಣ್ಣ ಮೂರ್ತಿಗಳು ಹೊರ್ಯೂಜಿಯ ಪಗೋಡದ ಗೂಡುಗಳಲ್ಲಿ ಉಳಿದುಬಂದಿವೆ. ಚೀನದ ತುನ್‍ಹುವಾಂಗ್ ಪ್ರಾಂತ್ಯದಲ್ಲಿ ಟಾಂಗ್ ವಂಶದ ಕಾಲಕ್ಕೆ ಸೇರಿದ ಜೇಡಿಮಣ್ಣಿನ ಶಿಲ್ಪಗಳನ್ನು ಈ ಗುಂಪಿನ ಬೋಧಿಸತ್ತ್ವ ಮೂರ್ತಿಗಳು ಹೋಲುತ್ತವೆ. ಮಾನವ ಗಾತ್ರಕ್ಕಿಂತಲೂ ದೊಡ್ಡವಾದ ಮೂವತ್ತು ಪ್ರತಿಮೆಗಳು ನಾರಾ ಮತ್ತು ಅದರ ಪರಿಸರದಲ್ಲಿ ಉಳಿದುಬಂದಿವೆ. ಅವುಗಳಲ್ಲಿ ಹೆಚ್ಚು ಭಾಗ ಒಂದೇ ಶೈಲಿಯಲ್ಲಿ, ಬಹುಶಃ ಒಂದೇ ಕಾಲಶಾಲೆಯಲ್ಲಿ, ನಿರ್ಮಿತವಾದಂತೆ ಕಾಣುತ್ತವೆ. ನಾಲ್ಕು ದಿಕ್ಪಾಲಕರ ಎರಡು ಗುಂಪುಗಳು ಕೈಡನ್-ಇನ್‍ನಲ್ಲೂ ಹೊರ್ಯೂಜಿಯ ಜಿಕಿಡೊದಲ್ಲೂ ಇವೆ. ಇವುಗಳಲ್ಲಿ ಅತ್ಯಂತ ಭಯಂಕರವಾಗಿ ಕಾಣುವುದು ಷುಕ್ಕುಂಗೊ-ಜಿನ್ (ವಜ್ರಪಾಣಿ). ಇದನ್ನು ಟೋಡೈಜಿಯ ಸಂಗಟ್ಸು ಡೋದಲ್ಲಿ ಇಡಲಾಗಿದೆ. ಭಾರತೀಯ ಬೌದ್ಧಮಂಡಲದ ಬ್ರಹ್ಮವನ್ನು ಹೋಲುವ ಬೊನ್‍ಟೆನ್ ವಿಗ್ರಹವನ್ನು ಅಂಜಲಿಬದ್ಧ ಧ್ಯಾನಮುದ್ರೆಯಲ್ಲಿ ನಿಂತಿರುವಂತೆ ರೂಪಿಸಲಾಗಿದೆ. ಈ ವಿಗ್ರಹವನ್ನು ಹಾಕೈಡೋ ಮಂದಿರದಲ್ಲಿ ಇಡಲಾಗಿದೆ. ತಲೆಗೂದಲನ್ನು ಮೇಲ್ಭಾಗದಲ್ಲಿ ಸುಂದರವಾದ ಕೊಂಡೆಯನ್ನಾಗಿ ಕಟ್ಟಲಾಗಿದೆ. ಜೇಡಿಮಣ್ಣಿನ ಈ ಎಲ್ಲ ವಿಗ್ರಹಗಳಿಗೆ ಸುಂದರವಾದ ಬಣ್ಣಗಳನ್ನು ಹಾಕಲಾಗಿತ್ತು.

	ಅರಗಿನ ಶಿಲ್ಪಗಳು ಈ ಕಾಲದ ಮತ್ತೊಂದು ವಿಶಿಷ್ಟ ಪ್ರಕಾರ. ಮರದ ಜಾಲರಿಯ ಅಥವಾ ಜೇಡಿಮಣ್ಣಿನ ಮೂಲಕೃತಿಗಳ ಮೇಲೆ ಕರಗಿದ ಅರಗಿನಲ್ಲಿ ಅದ್ದಿದ ಬಟ್ಟೆಯನ್ನು ಸುತ್ತಿ ಅದರ ಮೇಲೆ ಶಿಲ್ಪಗಳ ವಿವಿಧ ಅಂಗಾಂಗಗಳನ್ನು ಸೂಕ್ಷವಾಗಿ ಬಿಡಿಸಿದ ಅನಂತರ ಒಳಗಿನ ಮೂಲಕೃತಿಯನ್ನು ಹೊರ ತೆಗೆಯಲಾಗುತ್ತಿತ್ತು. ಡೊಳ್ಳಾದ ಅರಗಿನ ಬಟ್ಟೆಯ ಇಂಥ ಶಿಲ್ಪಗಳ ಐವತ್ತು ಕೃತಿಗಳು ಉಳಿದುಬಂದಿವೆ.

ಎಂಟು ದೇವತೆಗಳ, ಬುದ್ಧನ ಮೊದಲ ಹತ್ತು ಶಿಷ್ಯವರ್ಗದ ಪೈಕಿ ಆರು ಶಿಷ್ಯರ ಒಟ್ಟು ಹದಿನಾಲ್ಕು ಮಂದಿಯ ಅರಗಿನ ಸುಂದರ ಶಿಲ್ಪಗಳು ಈ ಪ್ರಕಾರದ ಅತ್ಯುತ್ತಮ ನಿದರ್ಶನಗಳು. 1,200 ವರ್ಷಗಳಿಗೂ ಹಿಂದೆ ಕೋಫುಕುಜಿ ಮಂದಿರಕ್ಕಾಗಿ ಇವನ್ನು ನಿರ್ಮಿಸಲಾಗಿತ್ತು. ನೆಟ್ಟಗೆ ನಿಂತ ಅಚಲ ದೇಹ, ಯೋಧರ ಅಥವಾ ಭಿಕ್ಷುಗಳ ಷೋಷಾಕು, ವರ್ಣರಂಚಿತ ಅಂಗಾಂಗಗಳು, ನೈಜ ಮುಖಚರ್ಯೆ-ಇವು ಈ ಶಿಲ್ಪಗಳ ಸಹಜತೆಯನ್ನು ಎತ್ತಿ ತೋರಿಸುತ್ತವೆ. 

ಚೀನೀ ಧರ್ಮಗುರು ಗಾಂಜಿನ್ 759ರಲ್ಲಿ ನಿರ್ಮಿಸಿದ ಟೋಷೊಡೈಜಿ ಮಂದಿರದಲ್ಲಿರುವ ಈ ಬಗೆಯ ಅರಗಿನ ಶಿಲ್ಪಗಳೂ ಗಮನಾರ್ಹ. ಗಾಂಜಿನನೊಂದಿಗೆ ಜಪಾನಿಗೆ ಬಂದ ಚೀನೀ ಕೆಲಸಗಾರರು ಮಂದಿರದ ನಿರ್ಮಾಣ ಮತ್ತು ಅಲಂಕರಣ ಕಾರ್ಯದಲ್ಲಿ ಜಪಾನೀ ಕೆಲಸಗಾರರೊಂದಿಗೆ ದುಡಿದರು. ಅವರ ಪ್ರಯತ್ನಗಳಿಂದ ನಿರ್ಮಿತವಾದ ಶಿಲ್ಪಗಳಲ್ಲಿ ಧ್ಯಾನಮಗ್ನನಾದ ಕುರುಡ ಧರ್ಮಗುರು ಗಾಂಜಿನನ ಶಿಲ್ಪದಲ್ಲಿ ಸೌಮ್ಯ ಜೀವಂತ ಸೌಂದರ್ಯ ಇದೆ. ಆ ಮಂದಿರದ ಪ್ರಧಾನ ಮೂರ್ತಿ ರೋಷಣ(ವೈರೋಚನ) ಬುದ್ಧ. ಈ ದೊಡ್ಡ ಮೂರ್ತಿ ಡೊಳ್ಳಾದ ಅರಗಿನ ಶಿಲ್ಪ. ಪೀಠವನ್ನೂ ಒಂದು ಸಾವಿರ ಬುದ್ಧಮೂರ್ತಿಗಳನ್ನೂ ಒಳಗೊಂಡ ಪ್ರಭಾವಲಯಗಳನ್ನು ಬಿಟ್ಟು ಈ ವಿಗ್ರಹದ ಎತ್ತರ 11'. ಅದೇ ಹಜಾರದಲ್ಲಿ  ಎತ್ತರದ ಒಂದು ಸಾವಿಕ ಕೈಗಳ ಸೆಂಜು ಕ್ವಾನೋನ್ ಪ್ರತಿಮೆ ಇದೆ. ಅರಗುಲೇಪಿತ ಬಟ್ಟೆಯ ವಿಗ್ರಹಗಳಲ್ಲಿ ಇದು ಅತ್ಯಂತ ದೊಡ್ಡದು. ಅಲ್ಲೇ 12' ಎತ್ತರದ ಯಕುಷಿ ವಿಗ್ರಹವೂ ಇದೆ. ಷೊರಿಂಜಿಯಲ್ಲಿರುವ,  ಎತ್ತರದ, 11 ಮುಖಗಳ, ಕ್ವಾನೋನ್ ಬೋಧಿಸತ್ವ ವಿಗ್ರಹ ಸೌಮ್ಯವಾದ್ದು. ಹೊಕ್ಕೇಜಿಯ ಭಿಕ್ಷುಣಿಯರ ವಿಹಾರದಲ್ಲಿರುವ ಬುದ್ಧದೇವನ ಪರಮಮಿತ್ರ ಯುಇಮ (ವಿಮಲಕೀರ್ತಿ) ಈ ಪ್ರಕಾರದ ಮತ್ತೊಂದು ಉತ್ತಮ ಪ್ರತಿಮೆ.

ಈ ಕಾಲದ ಕೊನೆಯ ಭಾಗದಲ್ಲಿ ಮರದ ಶಿಲ್ಪಗಳ ಮೇಲೆ ಸುದ್ದೆ ಮಣ್ಣು ಮತ್ತು ಅಂಟನ್ನು ಲೇಪಿಸಿ ಅದರ ಮೇಲೆ ವಿವಿಧ ಬಣ್ಣಗಳಿಂದ ಅಲಂಕಾರ ಮಾಡುವ ವಿಧಾನ ರೂಢಿಗೆ ಬಂತು. ಈ ಬಗೆಯ ಮೊದಮೊದಲ ಐದು ವಿಗ್ರಹಗಳ ಒಂದು ತಂಡ ಡೈಯಂಜಿ ಮಂದಿರದಲ್ಲಿದೆ. ಕ್ವಾನೋನ್ ಬೋಧಿಸತ್ತ್ವನ ವಿವಿಧ ಅಂಶಗಳನ್ನು ರೂಪಿಸುವ ಈ ಶಿಲ್ಪಗಳಲ್ಲಿ ಟಾಂಗ್ ಕಾಲದ ಚೀನೀ ಶಿಲ್ಪಗಳ ಪ್ರಭಾವಗಳನ್ನು ಕಾಣಬಹುದು. ಟೋಷೋಡೈಜಿ ಮಂದಿರದಲ್ಲಿರುವ ಈ ಪ್ರಕಾರದ ಹನ್ನೆರಡಕ್ಕೂ ಹೆಚ್ಚಿನ ಮೂರ್ತಿಗಳು 8ನೆಯ ಶತಮಾನದ ಕೊನೆಯ ಭಾಗಕ್ಕೆ ಸೇರಿದವು. ಈ ಕಾಲದಲ್ಲಿ ಹೊರಗಿನಿಂದ ಜಪಾನನ್ನು ಪ್ರವೇಶಿಸಿದ ಧಾರ್ಮಿಕ ಪ್ರಭಾವಗಳು ನೈಜವಾಗಿ ಸಾಗುತ್ತಿದ್ದ ಶಿಲ್ಪಕಲೆಗೆ ಕ್ರಮೇಣ ಪ್ರತಿಬಂಧಕವಾಗಿ ಪರಿಣಮಿಸಿ, ಹೊಸದೊಂದು ಶೈಲಿಗೆ ಬುನಾದಿ ಹಾಕಿದುವು.

ಪೂರ್ವ ಹೀಂiÀೂನ್ ಕಾಲ : 784-897. 784-794ರ ದಶಕದಲ್ಲಿ ಜಪಾನಿನ ಆಡಳಿತ ಬದಲಾಯಿತು. ರಾಜಧಾನಿಯನ್ನು ನಾರಾದಿಂದ ಕೀಯೋಟೋಗೆ ಬದಲಾಯಿಸಲಾಯಿತು. ಆಗ ಮತೀಯ ಮತ್ತು ಕಲಾಕ್ಷೇತ್ರಗಳಲ್ಲೂ ಕೆಲವು ಮಹತ್ತ್ವಪೂರ್ಣ ಬದಲಾವಣೆಗಳಾದುವು. ಧಾರ್ಮಿಕ ವಿಷಯಗಳಲ್ಲಿ ಆಡಳಿತ ವರ್ಗದವರ ಆಸಕ್ತಿ ಕುಗ್ಗಿತು. ಆ ಸಮಯದಲ್ಲಿ ಪ್ರಬಲವಾಗುತ್ತಿದ್ದ ಷಿಂಗೋನ್ ಮತ್ತು ಟೆಂಡೈ ಪಂಥಗಳ ವಿಹಾರಗಳಲ್ಲಿ ಬಳಸುತ್ತಿದ್ದ ಪ್ರತಿಮೆಗಳಿಗೆ ಹೆಚ್ಚಿನ ಬೇಡಿಕೆ ಬಂತು. ಶಿಲ್ಪ ನಿರ್ಮಾಣದಲ್ಲಿ ಮರದ ಬಳಕೆ ಹೆಚ್ಚಾಯಿತು. ಬೌದ್ಧಧರ್ಮದ ಪ್ರತಿಮೆಗಳು ತಮ್ಮ ನೈಜತೆಯನ್ನು ಕಳೆದುಕೊಂಡು, ತತ್ತ್ವಧ್ಯಾನಮಗ್ನ ಸಂತರ ಲಕ್ಷಣಗಳನ್ನು ಹೆಚ್ಚಾಗಿ ಬಿಂಬಿಸಲು ಆರಂಭಿಸಿದುವು. ಜಪಾನೀ ಮರದ ಶಿಲ್ಪಗಳು ತಾಂತ್ರಿಕ ನೈಪುಣ್ಯದ ಪರಾಕಾಷ್ಠೆ ಮುಟ್ಟಿದುವು. ಈ ಕಾಲದ ಶೈಲಿಯ ಶಿಲ್ಪಗಳು ತಮ್ಮ ಸ್ಥೂಲತೆ ಮತ್ತು ಸತ್ತ್ವಕ್ಕೆ ಹೆಸರು ಗಳಿಸಿದುವು.

ಮರದ ದಿಮ್ಮಿಗಳಲ್ಲಿ ದೊಡ್ಡ ವಿಗ್ರಹಗಳನ್ನು ಕಡೆಯುವುದರಲ್ಲಿ ಶಿಲ್ಪಿಗಳು ಸಿದ್ಧಹಸ್ತರಾದರು. ಈ ಕಾಲದ ಮುರೊಜಿ, ಗಂಗೊಜಿ ಮತ್ತು ಜಿಂಗೊಜಿಯ ಬುದ್ಧ ವಿಗ್ರಹಗಳ ಮುಖ, ದೇಹ ಮತ್ತು ಉಡುಪುಗಳಲ್ಲಿ ಒಂದು ಹೊಸ ಶಕ್ತಿ ಕಾಣುತ್ತದೆ. 9ನೆಯ ಶತಮಾನದ ಮೂರೊಜಿಯ ದೇವಾಲಯದಲ್ಲಿರುವ, ಕುಳಿತ ಷಾಕ (ಶಾಕ್ಯಮುನಿ) ಬುದ್ಧ ವಿಗ್ರಹ ಈ ಶೈಲಿಗೆ ಉತ್ತಮ ನಿದರ್ಶನ. ಹೋಕೈಜಿಯ, ಹನ್ನೊಂದು ಮುಖಗಳ ಕ್ವಾನೋನ್ ಶಿಲ್ಪ ಘನವಾದರೂ ಹಗುರತೆಯ ಭಾವವನ್ನು ಸೂಸುವ ಆ ಶೈಲಿಯಲ್ಲಿ ಇದು ಅತ್ಯುತ್ತಮ ಸುಂದರಶಿಲ್ಪ. ಇದನ್ನು ಶ್ರೀಗಂಧದ ಮರದಲ್ಲಿ ಕಡೆಯಲಾಗಿದೆ. ನ್ಯೊಯಿರಿನ್‍ನ ಕ್ವಾನ್‍ಷಿನ್‍ಜಿಯ ಆರು ಕೈಗಳ ಕ್ವಾನೋನ್ ಬೋಧಿಸತ್ತ್ವ ಮೂರ್ತಿ ಅತಿಮಾನವತೆಯ ಮತ್ತು ಮಾತೃತ್ವದ ಭಾವನೆಗಳನ್ನು ಪ್ರದರ್ಶಿಸುತ್ತದೆ. ಇದು ಹೋಕೈಜಿ ಬೋಧಿಸತ್ತ್ವನಿಗಿಂತ ವಿಭಿನ್ನವಾಗಿದೆ. ದೈವೀಶಕ್ತಿ ಮತ್ತು ದೈವೀಕರುಣೆಗಳ ಭಾವನೆಗಳನ್ನು ಶಿಲ್ಪಿ ಇದರಲ್ಲಿ ತುಂಬಿದ್ದಾನೆ. ಕಲಾ ತಂತ್ರದಲ್ಲಿ ಹೆಚ್ಚು ಪರಿಶ್ರಮ ಪಡೆದವರಿಗೆ ಮಾತ್ರ ಅರ್ಥವಾಗುವಂತೆ ಇದನ್ನು ರೂಪಿಸಲಾಗಿದೆ. ಧ್ಯಾನ ಮಗ್ನ ಜಿಂಗೊಜಿಯ ಕೊಂಗೊ ಕೊಕುಜೊ ಶಿಲ್ಪಗಳಲ್ಲಿ ಮಾನವತೆಯ ಹೋಲಿಕೆ ಅಪ್ರಧಾನ. ಅಲ್ಲಿ ಯೋಗಮುದ್ರೆಗಳಿಗೆ ಪ್ರಾಮುಖ್ಯ. ಷಿಂಟೋಮತಕ್ಕೆ ಸೇರಿದ ಹಲವಾರು ಸ್ತ್ರೀಪುರುಷ ದೇವತೆಗಳ ವಿಗ್ರಹಗಳು ಅದೃಷ್ಟವಶಾತ್ ಉಳಿದು ಬಂದಿವೆ. ಸರಳವಾದರೂ ಭವ್ಯ ಶೂನ್ಯತೆಯ ಪ್ರತೀಕಗಳಂತಿರುವ ಈ ಶಿಲ್ಪಗಳಿಗೆ ಚೀನೀ ಪರಂಪರೆಯ ವಿಗ್ರಹಗಳಂತೆ ಉಡುಪುಗಳಿವೆ. ಇವನ್ನು ಆಸೀನಭಂಗಿಗಳಲ್ಲಿ ನಿರೂಪಿಸಲಾಗಿದ್ದರೂ ಬೌದ್ಧಶಿಲ್ಪಗಳೊಂದಿಗೆ ಇವಕ್ಕೆ ಯಾವ ಹೋಲಿಕೆಯೂ ಇಲ್ಲ. ಜಪಾನಿನ ಯಕುಷಿಜಿ ಮತ್ತು ಇತರ ಎಡೆಗಳಲ್ಲಿ ಆ ಗುಂಪಿನ ಆರು ಶಿಲ್ಪಗಳು ಉಳಿದುಬಂದಿವೆ. ಅವುಗಳಲ್ಲಿ ಚಕ್ರವರ್ತಿನಿ ಜಿಂಗೊ ಎಂಬವಳ ಶಿಲ್ಪ ಗಮನಾರ್ಹ.

ಉತ್ತರ ಹೀಯಾನ್ (ಫುಜಿವಾರಾ) ಕಾಲ : 897-1185. ಈ ಆಡಳಿತದ ಕಾಲದಲ್ಲಿ ಬೌದ್ಧಮತಕ್ಕೆ ಮತ್ತೆ ರಾಜಾಶ್ರಯ ದೊರಕಿತು. ಆದ್ದರಿಂದ ಈ ಕಾಲದಲ್ಲಿ ಅನೇಕ ಬೌದ್ಧವಿಹಾರಗಳೂ ಅಸಂಖ್ಯಾತ ಶಿಲ್ಪಗಳೂ ಸೃಷ್ಟಿಯಾದುವು. ಆದ್ದರಿಂದ ಈ ಕಾಲದಲ್ಲಿ ಅನೇಕ ಬೌದ್ಧವಿಹಾರಗಳೂ ಅಸಂಖ್ಯಾತ ಶಿಲ್ಪಗಳೂ ಸೃಷ್ಟಿಯಾದುವು. ಅಮಿದ (ಅಮಿತಾಭ) ಬುದ್ಧನ ಕಲ್ಪನೆಯ ಸ್ವರ್ಗದ ಅನುಭವವನ್ನು ಆಡಳಿತಗಾರ ಶ್ರೀಮಂತರು ಇಹಲೋಕದಲ್ಲಿ ಕಾಣಲು ಎಳಸಿದ್ದರಿಂದ ಅವರ ಆಶ್ರಿತರಾದ ಶಿಲ್ಪಿಗಳೂ ಕಲೆಗಾರರೂ ಅಂಥ ಕಲ್ಪನೆಯ ಸ್ವರ್ಗತುಲ್ಯವಾದ ಮಂದಿರಗಳನ್ನೂ ಆ ಮಂದಿರಗಳಲ್ಲಿ ಆ ಸ್ವರ್ಗದ ಸುಖಸಂತೋಷದಾಯಕ ದೃಶ್ಯಗಳನ್ನೂ ನಿರ್ಮಿಸಲಾರಂಭಿಸಿದರು. ಉಜಿ ಎಂಬಲ್ಲಿಯ ಬ್ಯೋಡೋಯಿನ್ ಮಂದಿರದ ಹೂಡೊ ಹಜಾರದಲ್ಲಿ ಜೋ ಚೋ ಎಂಬ ಶಿಲ್ಪಿಯಿಂದ 1053ರಲ್ಲಿ ನಿರ್ಮಿತವಾದ, 9' ಎತ್ತರದ, ಚಿನ್ನದ ರೇಕುಗಳಿಂದ ಅಲಂಕೃತವಾದ, ಮರದ ಅಮಿದ ಬುದ್ಧನ ವಿಗ್ರಹ ಈ ಶೈಲಿಯ ಉತ್ತಮ ಪ್ರತೀಕ. ಅದರ ಭವ್ಯ ಕೆತ್ತನೆಗಳಿಂದ ಕೂಡಿದ ಪ್ರಭಾವಳಿ ಅದ್ಭುತವಾದ್ದು. ಅದೇ ಶೈಲಿಗೆ ಸೇರಿದ. 1124ರಲ್ಲಿ ನಿರ್ಮಿತವಾದ, ಚೂಸೊನ್‍ಜಿ ಮಂದಿರದ ಕೊಂಜಿ ಕಿಡೊ ಹಜಾರದಲ್ಲಿರುವ, ಮರದ ಇಚಿಜಿ ಕಿನ್‍ರಿನ್ ಶಿಲ್ಪವೂ ಬೋಧಿಸತ್ತ ಮತ್ತು ಇತರ ದೇವತೆಗಳ ಅಲಂಕೃತ ಶಿಲ್ಪಗಳೂ ಗಮನಾರ್ಹ.

ಫುಜಿವಾರಾ ಶೈಲಿಯಲ್ಲಿ ಆ ಮೊದಲು ಬಳಕೆಯಲ್ಲಿದ್ದ ಹಲವು ಶೈಲಿಗಳ ಪ್ರಭಾವಗಳು ಪುನಃ ಬಳಕೆಗೆ ಬಂದುವು. ನಾರಾ ಕಾಲಗಳ ಶೈಲಿಗಳೊಂದಿಗೆ ಬೆರೆತ ಸೌಮ್ಯ ನಯಗಾರಿಕೆ ಈ ಕಾಲದಲ್ಲಿ ರೂಢಿಗೆ ಬಂತು. ಈ ಕಾಲದಲ್ಲೂ ಬೌದ್ಧಶಿಲ್ಪಗಳಿಗೆ ಬೇಡಿಕೆ ಹೆಚ್ಚುತ್ತಿತ್ತು. ಶಿಲ್ಪನಿರ್ಮಾಣದಲ್ಲಿ ಒಂದು ಹೊಸ ತಂತ್ರ ತಲೆದೋರಿತು. ದೇಹದ ವಿವಿಧ ಅಂಗಗಳನ್ನು ಬಿಡಿಯಾಗಿ ತಯಾರಿಸಿ ಅದನ್ನು ಜೋಡಿಸಿ ಮೂರ್ತಿಯನ್ನು ತಯಾರಿಸಲಾಗುತ್ತಿತ್ತು. ಇದರಿಂದ ಶಿಲ್ಪಗಳನ್ನು ಶೀಘ್ರ ಹಾಗೂ ಕಡಿಮೆ ಖರ್ಚಿನಿಂದಲೂ ತಯಾರಿಸುವುದು ಸಾಧ್ಯವಾಯಿತು. ದೊಡ್ಡ ಮೂರ್ತಿಗಳ ತಯಾರಿಕೆಗೆ ಈ ವಿಧಾನ ಬಹಳ ಸಹಾಯಕವಾಯಿತು. 
ಈ ಶೈಲಿಯ ಉತ್ತಮ ಕೌಶಲದ ಅನೇಕ ಶಿಲ್ಪಗಳು ಜಪಾನಿನ ಆದ್ಯಂತ ಅಧಿಕ ಸಂಖ್ಯೆಯಲ್ಲಿ ಕಂಡುಬರುತ್ತವೆ. ಚೂಸೊನ್‍ಜಿ ಮಂದಿರದ ಇಚಿಜಿ ಕಿನ್ ರಿನ್ ಗಮನಾರ್ಹ. ಅದರ ಮುಂಭಾಗವನ್ನು ದುಂಡುಶಿಲ್ಪ ಪದ್ಧತಿಯಲ್ಲಿ ನಿರ್ಮಿಸಲಾಗಿದೆ. ಹಿಂಭಾಗವನ್ನು ಡೊಳ್ಳಾಗಿ ಬಿಡಲಾಗಿದೆ. ನಾರಾ ಬಳಿಯ ಜೋರುರಿಜಿ ಮಂದಿರದಲ್ಲಿರುವ ಶುಭಶಕುನಗಳ ಅಧಿದೇವತೆ ಕಿಚಿಜೋಟಿನ್ ಶಿಲ್ಪ ಗಮನಾರ್ಹ. ಕಮಲ ಪುಷ್ಪದ ಮೇಲೆ ತೇಲಿಹೋಗುತ್ತಿರುವಂತೆ ಅದನ್ನು ರೂಪಿಸಲಾಗಿದೆ. ರಾಜಮನೆತನದ ಸ್ತ್ರೀಯಂತೆ ಮೈತುಂಬ ಉಡುಪು ತೊಟ್ಟು ತಲೆಗೂದಲನ್ನು ಇಬ್ಬದಿಗೂ ಹರಿದು ಬೀಳುತ್ತಿರುವಂತೆ ಧರಿಸಿ, ಅದರ ಮೇಲೆ ಅಲಂಕಾರಪೂರ್ಣ ಕಿರೀಟವನ್ನು ಧರಿಸಿರುವಂತೆ ರೂಪಿಸಲಾಗಿರುವ ಈ ಶಿಲ್ಪ ಕೇವಲ ಸ್ತ್ರೀ ಸೌಂದರ್ಯವನ್ನು ಮಾತ್ರವಲ್ಲ. ನಿರಾಸಕ್ತ ಕರುಣಾಮೂರ್ತಿಯ ದೈವೀಭವವನ್ನು ಸೂಸುತ್ತದೆ.

ಶಕ್ತವಾದ ದೇಹ, ಸುಕ್ಕಾದ ಮುಖ, ವಿಕೃತವಾದ ತಿರುವುಮುರುವುಗಳಿಂದ ಕೂಡಿದ ದೇಹ ಉಳ್ಳ ಕೋಫು ಕುಜಿ ಮಂದಿರದ ಹನ್ನೆರಡು ದಳಪತಿಗಳ ಶಿಲ್ಪಗಳನ್ನು ವ್ಯಂಗ್ಯಶಿಲ್ಪಗಳೆಂದು ಪರಿಗಣಿಸಬಹುದು.

ಕಾಮಾಕುರಾ ಕಾಲ : 1185-1333. ಈ ಕಾಲದ ಆರಂಭದಲ್ಲಿ ದೇಶದ ಆಡಳಿತ ಮಿನಾಮೊಟೊ ಯೊರಿಟೊಮೊ ಎಂಬವನ ಕೈವಶವಾಯಿತು. ಆಡಳಿತ ಕೇಂದ್ರ ರಾಜಧಾನಿಯನ್ನು ಕೀಯೋಟೋದಿಂದ ಕಾಮಾಕುರಾಗೆ ಬದಲಾಯಿಸಲಾಯಿತು. ಆ ಸಂದರ್ಭದಲ್ಲಿ ಸಾಂಸ್ಕøತಿಕ ರಂಗದಲ್ಲೂ ಕೆಲವು ಮಾರ್ಪಾಟುಗಳಾದುವು. ಫುಜಿವಾರಾ ಕಾಲದ ಧಾರ್ಮಿಕ ಶ್ರದ್ಧೆ ಕಡಿಮೆಯಾದರೂ ಹೊಸ ಯುಗದಲ್ಲಿ ಶಿಲ್ಪಿಗಳ ಮತ್ತು ಕುಶಲ ಕೆಲಸಗಾರರ ಕೃತಿಗಳಿಗೆ ಬೇಡಿಕೆ ಹೆಚ್ಚಿತು. ಶಿಲ್ಪಕಲೆಯಲ್ಲಿ ಹಳೆಯ ಶೈಲಿ ಸ್ವಲ್ಪ ಕಾಲ ಮುಂದುವರಿದರೂ ಹೊಸ ಪದ್ಧತಿಗಳೂ ತಂತ್ರಗಳೂ ತಲೆದೋರಿದುವು. ಮಾನವೀಯತೆಗೆ ಪ್ರಾಧಾನ್ಯ ನೀಡಿ ಧಾರ್ಮಿಕ ಕ್ಷೇತ್ರದಲ್ಲಿ ಜನರ ಸುಖಸಂತೋಷಗಳಿಗೆ ಪ್ರಾಶಸ್ತ್ಯ ನೀಡಲಾಯಿತು.

ಈ ಕಾಲದಲ್ಲಿ ನಾರಾ ನಗರದ ಬಳಿಯ ಮಂದಿರಗಳನ್ನು ದುರಸ್ತಿಗೊಳಿಸಲಾಯಿತು. ದೊಡ್ಡ ಗಾತ್ರದ ದೇವತಾವಿಗ್ರಹಗಳನ್ನು ಹೆಚ್ಚು ಸಂಖ್ಯೆಯಲ್ಲಿ ನಿರ್ಮಿಸಲು ಉತ್ತೇಜನ ನೀಡಲಾಯಿತು. ನಾರಾದಲ್ಲಿ ಭಗ್ನಾವಸ್ಥೆಯಲ್ಲಿದ್ದ ಡೈಬುಟ್ಸು-ಡೆನ್ ಮಂದಿರವನ್ನು ಜೀರ್ಣೋದ್ಧಾರಗೊಳಿಸಿದಾಗ, 32' ಎತ್ತರದ ಆರು ವಿಗ್ರಹಗಳನ್ನು-ನಾಲ್ಕು ದಿಕ್ಪಾಲಕರು, ಕ್ವಾನೋನ್ ಮತ್ತು ಕೊಕುeóÉೂಗಳನ್ನು-ಮಾಡಲು ಯೊರಿಟೊಮೊ ಆದೇಶವಿತ್ತ. ಅವುಗಳ ಭಾಗಗಳನ್ನು ಬಿಡಿಬಿಡಿಯಾಗಿ ಮಾಡಿ ಅನಂತರ ಜೋಡಿಸಲಾಯಿತು. ಆ ಕಾರ್ಯವನ್ನು ಸುಪ್ರಸಿದ್ಧ ಶಿಲ್ಪಿ ಉನ್ ಕೆಯಿ ಎಂಬವನ ನಾಯಕತ್ವದಲ್ಲಿ ನಾಲ್ವರು ಶಿಲ್ಪಗುರುಗಳ ಸುಮಾರು 250 ಮಂದಿ ಸಹಾಯಕರೊಂದಿಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ದುಡಿದು ಪೂರ್ಣಗೊಳಿಸಿದರು. ದುರದೃಷ್ಟವಶಾತ್ ಅವು 15ನೆಯ ಶತಮಾನದಲ್ಲಿ ಅಗ್ನಿಗೆ ಆಹುತಿಯಾದುವು. ಆದರೆ ನಾರಾ ಮತ್ತು ಟಾಂಗ್ ಶೈಲಿಗಳ ಪ್ರಭಾವದಿಂದ ಕೂಡಿದ, ಅದೇ ಶೈಲಿಗೆ ಸೇರಿದ 26' ಎತ್ತರದ, ನಿಯೋ ಪಾಲಕ ದೇವತೆಗಳ ಮರದ ಎರಡು ಶಿಲ್ಪಗಳು ಇನ್ನೂ ಉಳಿದು ಬಂದಿವೆ. ಈ ವಿಗ್ರಹಗಳನ್ನು ತಯಾರಿಸಿದ ಶಿಲ್ಪಿಗಳು ಉನ್ ಕೆಯಿ ಮತ್ತು ಕೈಕೆಯಿ, ಅವುಗಳ ಮುಖದಲ್ಲಿಯ ರೌದ್ರ, ಭಾವ, ಉಬ್ಬಿದ ಅಂಗಾಂಗಗಳು, ದೌಷ್ಟ್ಯ-ಇವು ಕಾಮಾಕುರಾ ಶೈಲಿಯ ವಿಶಿಷ್ಟ ಲಕ್ಷಣಗಳು. ಕೋಫುಕುಜಿಯ ಹೊಕು ಎನ್-ಡೊದಲ್ಲಿ ಉನ್‍ಕೆಯಿ ಮತ್ತು ಅವನ ನಾಲ್ವರು ಪ್ರತ್ರರು ಸೇರಿ ನಿರ್ಮಿಸಿದ, ಮೈತ್ರೇಯನ ಅನುಚರರಾದ ಸೆಯಿಷಿನ್ ಮತ್ತು ಮುಜುಕು ಇವರ 6' ಎತ್ತರದ ಶಿಲ್ಪಗಳು ಜೀವಂತವಾಗಿರುವಂತೆ ಇವೆ.

ಕಾಮಾಕುರಾ ಕಾಲದಲ್ಲಿ ಶಿಲ್ಪಿಗಳ ಸಂಘಗಳು ಅಸ್ತಿತ್ವದಲ್ಲಿದ್ದುವು. ಅಂಥ ಶ್ರೇಣಿಗಳಲ್ಲಿ ಶಿಲ್ಪಗುರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಸಹಾಯಕರು ಎರಕ ಹೊಯ್ದಂತೆ ಅಧಿಕ ಸಂಖ್ಯೆಯಲ್ಲಿ ಪ್ರತಿಕೃತಿಗಳನ್ನು ತಯಾರಿಸುತ್ತಿದ್ದರು. ಹಾಗೆ ತಯಾರಿಸಿದ ಶಿಲ್ಪಗಳು ದೇಶಾದ್ಯಂತ ಬಳೆಯಲ್ಲಿದ್ದುವು. ಇವು ಆಯಾ ಸಂಘಗಳ ಕಾರ್ಯಕುಶಲತೆಯ ಸಾಕ್ಷ್ಯಗಳಾಗಿದ್ದುವು. ಕೀಯೋಟೋದ ಸಂಜುಸನ್-ಜೆನ್-ಡೊ ಮಂದಿರದಲ್ಲಿರುವ, ಮರದಿಂದ ಮಾಡಿದ, ಕಂಚಿನ ಲೇಪವುಳ್ಳ ಒಂದು ಸಾವಿರ ಶಿಲ್ಪಗಳು ಆ ಪದ್ಧತಿಗೆ ಸಾಕ್ಷಿಗಳು. ಆ ಶಿಲ್ಪಗಳನ್ನು ಉನ್‍ಕೆಯಿ, ಅವನ ತಂದೆ ಕೊಕೆಯಿ, ಅವನ ಮಗ ಟುನ್‍ಕೆಯಿ ಮುಂತಾದವರು ಹಲವು ವರ್ಷಗಳ ಅವಧಿಯಲ್ಲಿ ರೂಪಿಸಿದರು. ಆ ಶಿಲ್ಪಿಗಳ ಪ್ರತಿಮೆಗಳನ್ನೂ ಆ ಮಂದಿರದಲ್ಲಿ ಇಡಲಾಗಿದೆ. ಅಮಿದ ಬುದ್ಧನ ನಾಮಸ್ಮರಣೆ ಮಾಡುತ್ತ ಕೈಯಲ್ಲಿ ಕೋಲನ್ನು ಹಿಡಿದು ಕಾಲ್ನಡಗೆಯಿಂದ ದೇಶಾಟನೆ ಮಾಡುತ್ತಿದ್ದ ಸಂತ ಕೂಯನ ಮೂರ್ತಿಯನ್ನು ನಿರ್ಮಿಸಿದ ಶಿಲ್ಪಿ ಕೋಷೊ. ಅದು ಈಗ ರೊಕುಹರ ಮಿಟ್ಸುಜಿಯಲ್ಲಿದೆ. ಅದು ಬಹಳ ಸುಂದರ ಮತ್ತು ನೈಜಕೃತಿ. ಕೋಷೊನ ಸೋದರ ಕೋಬೆನ್ ಕೂಡ ಹೆಸರಾಂತ ಶಿಲ್ಪಿ. ತಲೆಯ ಮೇಲೆ ಕೊಂಬುಗಳೂ ಮೂರು ಕಣ್ಣುಗಳೂ ಉಳ್ಳದೈತ್ಯ ದೀಪಧಾರಿಗಳ ಶಿಲ್ಪಗಳು ಕೋಫುಕುಜಿ ಮಂದಿರದಲ್ಲಿವೆ. ಇವನ್ನು ಕೊಪೆನ್ ನಿರ್ಮಿಸಿದ.

ಕಾಮಾಕುರಾ ನಗರದ ನಾಗರಿಕ ಶಿಲ್ಪಕೃತಿಗಳಲ್ಲೂ ಉನ್ನತ ಕಲಾಪ್ರೌಢಿಮೆಯನ್ನು ಕಾಣಬಹುದು. ಉದ್ದನೆಯ ಟೊಪ್ಪಿಗೆ, ಗಂಜಿ ಹಾಕಿ ಇಸ್ತ್ರಿ ಮಾಡಿದಂತೆ ಕಾಣುವ ಅಂಗಿ, ಉಬ್ಬಿ ನಿಂತ ಚಲ್ಲಣ-ಇವನ್ನು ಧರಿಸಿ ಕುಳಿತಿರುವ ಷೆಗೆ ಫುಸನ ಮರದ ಶಿಲ್ಪ ಈ ನೈಜ ಪ್ರೌಢಕಲೆಗೆ ಉತ್ತಮ ನಿದರ್ಶನ. ವಾದ್ಯವನ್ನು ನುಡಿಸುತ್ತ ನಗ್ನಳಾಗಿ ಸುಖಾಸನದಲ್ಲಿ ಕುಳಿತಿರುವ ಬೆನ್‍ಜೈಟಿನ್ ಶಿಲ್ಪ ಮತ್ತೊಂದು ಉತ್ತಮ ಕಲಾಕೃತಿ. 1252ರಲ್ಲಿ ನಿರ್ಮಿಸಲಾದ ಅಮಿದಬುದ್ಧ ಮೂರ್ತಿ ಜಗತ್ಪ್ರಸಿದ್ಧ. ಇದು 49' ಎತ್ತರವಿದೆ. ಕಾಮಾಕುರಾ ಕಾಲದಲ್ಲಿ ಶಿಲ್ಪಿಗಳು ಪರಂಪರಾಗತ ಶೈಲಿಯೊಂದಿಗೆ ಆ ಕಾಲದ ಹೊಸ ಲಕ್ಷಣಗಳನ್ನೂ ಸಮನ್ವಯಗೊಳಿಸಿಕೊಂಡು ಅಸಂಖ್ಯಾತ ಸುಂದರ ಶಿಲ್ಪಗಳನ್ನು ನಿರ್ಮಿಸಿದರು. ಈ ಕಾಲ ಜಪಾನೀ ಶಿಲ್ಪಕಲೆಯ ಕೊನೆಯ ಉಚ್ಛ್ರಾಯ ಕಾಲವೆಂದು ಪರಿಗಣಿತವಾಗಿದೆ. ಅನಂತರ ಶಿಲ್ಪಕಲೆ ಕ್ಷೀಣಿಸಿತು.

	14ನೆಯ ಶತಮಾನದಲ್ಲಿ ಜಪಾನು ಅನೇಕ ಯುದ್ಧಗಳಲ್ಲೂ ದಂಗೆಗಳಲ್ಲೂ ಸಿಲುಕಿಕೊಂಡಿತು. ಸಾಮಾಜಿಕ ಏರುಪೇರುಗಳು ಸಂಭವಿಸಿದವು. ಚೀನದಿಂದ ಪ್ರವೇಶಿಸಿದ ಹೊಸ eóÉನ್ ಬೌದ್ಧಪಂಥ ಪ್ರಬಲವಾಯಿತು. ಆ ಹೊಸ ಪಂಥದಲ್ಲಿ ವಿಗ್ರಹಾರಾಧನೆಗೆ ಪ್ರಾಶಸ್ತ್ಯ ಇರಲಿಲ್ಲ. ಹಳೆಯ ಸಂಪ್ರದಾಯದಂತೆ ಆಗಾಗ್ಗೆ ನಿರ್ಮಿಸುತ್ತಿದ್ದ ಬುದ್ಧಶಿಲ್ಪಗಳಲ್ಲಿ ಯಾವುದೇ ನಾವೀನ್ಯವಾಗಲಿ ಮೋಹಕ ಗುಣವಾಗಲಿ ಕಾಣ ಬರುತ್ತಿರಲಿಲ್ಲ. ಅನಂತರದ ಕಾಲದಲ್ಲಿ ಉತ್ತಮಕೃತಿಗಳೆಂದು ಪರಿಗಣಿಸಬಹುದಾದ ಒಂದೆರಡು ಕೃತಿಗಳು ಆಗಾಗ್ಗೆ ಬಿಡಿಬಿಡಿಯಾಗಿ ನಿರ್ಮಿತವಾಗುತ್ತಿದ್ದವು. ಅಂಥ ಶಿಲ್ಪಗಳಲ್ಲಿ ಪ್ರಾಣಿಗಳ ಕೆಲವು ಗೊಂಬೆಗಳು ಗಮನಾರ್ಹ.
(ಬಿ.ಕೆ.ಜಿ.)

	ಜಪಾನೀ ಸಂಗೀತ : ಚೀನೀ ಸಂಗೀತವನ್ನು ತಳಹದಿಯಾಗಿಟ್ಟುಕೊಂಡು ಜಪಾನೀಯರು ತಮ್ಮದೇ ಸಂಗೀತದ ನಡೆಯಲ್ಲಿ ರಾಗ ತಾಳಗಳಲ್ಲಿ ಸಾಹಿತ್ಯದಲ್ಲಿ ವಾದ್ಯಗಳಲ್ಲಿ ಎರಡೂ ಕಲೆಗಳ ಮಿಶ್ರಣವನ್ನೂ ಕಾಣಬಹುದು. ಅನೇಕ ಶತಮಾನಗಳ ಕಾಲ ಇಂಥ ಮಿಶ್ರಣ ನಡೆದು ಬಂದಿತಾಗಿ ಜಪಾನೀ ಸಂಗೀತದಲ್ಲಿ ಒಂದು ಸ್ಥಿರವಾದ ಹೊಸ ನಡೆ ಏರ್ಪಟ್ಟಿದೆ.

	ಸುಮಾರು ಮೂರನೆಯ ಶತಮಾನದಲ್ಲಿ ಚೀನೀಯರ ಸಂಗೀತ ಕೊರಿಯವನ್ನು ಹಾದು ಜಪಾನನ್ನು ಸೇರಿತೆಂದು ಇತಿಹಾಸ ತಿಳಿಸುತ್ತದೆ.

	ಜಪಾನಿನ ವಾದ್ಯಮೇಳದಲ್ಲಿ ಹಿಚಿರಿಕಿ (ಪಾಶ್ಚಾತ್ಯ ದೇಶದ ಪಿಕಲೊ ಎಂಬ ವಾದ್ಯವನ್ನು ಹೋಲುತ್ತದೆ) ಹಾಗೂ ಷೋ ಎಂಬ ಸುಶಿರವಾದ್ಯವೂ ಹಲವಾರು ವೇಣುವಾದ್ಯಗಳೂ ತಾಳಗಳೂ ಮದ್ದಳೆಗಳೂ ಇವೆ. ಸಂಗೀತ ವಿದ್ವಾಂಸರು ಚೀನದಿಂದ ಹಿಂದಿರುಗುವಾಗ ತಮ್ಮೊಡನೆ ಬಿವಾ ಮತ್ತು ಷಕುಹಜೀ ವಾದ್ಯಗಳನ್ನು ತಂದು ತಮ್ಮ ದೇಶದ ವಾದ್ಯಮೇಳವನ್ನು ಅತ್ಯಂತ ರಂಜನೀಯವನ್ನಾಗಿ ಮಾಡಿದರು. ಚೀನದಲ್ಲಿನಂತೆ ಮತಧರ್ಮಕ್ಕನುಸಾರವಾಗಿ ನಾರಾ ಮುಂತಾದ ದೇವಾಲಯಗಳಲ್ಲಿ ಜಪಾನಿನಲ್ಲಿಯೇ ಹುಟ್ಟಿ ಬೆಳೆದ ಮತ್ತೊಂದು ರೀತಿಯ ಸಂಗೀತ ಮತ್ತು ನೃತ್ಯಕ್ರಮಗಳು ಬಳಕೆಯಲ್ಲಿದ್ದುವು. ಜಪಾನಿನಲ್ಲಿ ಪ್ರಧಾನವಾಗಿ ಬಳಸುತ್ತಿದ್ದ ಇತರ ವಾದ್ಯಗಳೆಂದರೆ ಕೋಟೋ ಮತ್ತು ಕೊಳಲು, ಷಿಂಟೋ ಮತ್ತು ಬೌದ್ಧ ಮತಾಚಾರ ಹಬ್ಬಗಳಲ್ಲಿ ರೂಢಿಯಲ್ಲಿದ್ದ ಕಾಂಗಾರು ಸಂಗೀತ ಮೇಲೆ ಹೇಳಿದ ವಾದ್ಯಗಳನ್ನೊಳಗೊಂಡಿತ್ತು. ಮನೋರಂಜನೆಯೇ ಪ್ರಧಾನವಾಗಿದ್ದ ಮತ್ತೊಂದು ಸಂಗೀತ ಶೈಲಿಯೊಂದು ಮತೀಯ ಗಾಯನದ ಜೊತೆಜೊತೆಗೇ ಕ್ರಮವಾಗಿ ವೃದ್ಧಿಯಾಗುತ್ತಿತ್ತು. ಕೋಟೋ ವಾದ್ಯದ ಉಗಮ ಜಪಾನಿನಲ್ಲಿಯೇ ಆದುದೆಂದು ಕೆಲವು ಗ್ರಂಥಗಳು ಉಲ್ಲೇಖಿಸುತ್ತವೆ. 17ನೆಯ ಶತಮಾನದಲ್ಲಿ ಈ ವಾದ್ಯ ಮತೀಯ ಗಾಯನ ಮತ್ತು ಲೌಕಿಕ ಗಾಯನಗಳಲ್ಲಿಯೂ ಬಳಕೆಯಲ್ಲಿತ್ತು. ಇದು ಚೀನದಲ್ಲಿನ ಕಿನ್ ವಾದ್ಯದ ಪರಿವರ್ತನೆ ಹೊಂದಿದ ರೂಪವೆಂತಲೂ ಹೇಳುವವರಿದ್ದಾರೆ. ಸುಮಾರು 6'ಯಷ್ಟು ಉದ್ದವಿರುವ ಈ ವಾದ್ಯದ ಅನುರಣಕ ಸ್ವಲ್ಪ ಉಬ್ಬಿದೆ. ರೇಷ್ಮೆಯಿಂದ ಸುತ್ತಲ್ಪಟ್ಟಿರುವ ಹದಿಮೂರು ತಂತಿಗಳನ್ನು ವಾದ್ಯದ ಒಂದು ತುದಿಯಲ್ಲಿ ಬಿಗಿದು ಮತ್ತೊಂದು ತುದಿಯನ್ನು ಚಲಿಸುವ ಕುದುರೆಗಳ ಮೇಲೆ ಹಾಯಸಿ ಕಟ್ಟಿರುತ್ತಾರೆ. ತಂತಿಯನ್ನು ಶ್ರುತಿಗೆ ಸಿದ್ಧಪಡಿಸಿ ನಾದದಲ್ಲಿ ಸ್ವಲ್ಪ ಏರಿಳಿತಗಳು ಬೇಕಾದ ಸಂದರ್ಭಗಳಲ್ಲಿ ಈ ಚಲಿಸುವ ಕುದುರೆಗಳನ್ನು ಹಿಂದಕ್ಕೂ ಮುಂದಕ್ಕೂ ಜರುಗಿಸಿ ತೀವ್ರ ಮತ್ತು ಕೋಮಲ ಸ್ವರಗಳನ್ನು ಉತ್ಪತ್ತಿ ಮಾಡಬಹುದು. ಈ ವಾದ್ಯದಲ್ಲಿ ಪೂರ್ಣ ಶ್ರುತಿ, ಅರ್ಧ ಶ್ರುತಿ ಅಂತರಗಳನ್ನು ಪಡೆಯಲವಕಾಶವಿದೆ. ಚೀನ ಮತ್ತು ಇತರ ಪಾಶ್ಚಾತ್ಯ ದೇಶದವರಂತೆಯೇ 12 ಸ್ವರಗಳನ್ನು ಸಮಾನ ಅಂತರದಲ್ಲಿ ಒಂದು ಅಷ್ಟಕದಲ್ಲಿ ಸೇರಿಸಿ ಹಲವಾರು ಸ್ವರಶ್ರೇಣಿಗಳನ್ನು ಜಪಾನೀಯರೂ ಬಳಸುತ್ತಾರೆ. ಆದರೆ ಇವರಲ್ಲಿ ಅತಿ ಪ್ರಮುಖವಾದ ಒಂದು ಔಡವ ಸ್ವರಶ್ರೇಣಿ ಇದೆ. ಈ ಶೃತಿಗೆ ಸೇರಿಸುವ ಕ್ರಮವನ್ನು ಹಿರಾಜೋಷಿ ಎನ್ನುತ್ತಾರೆ. ಇದೇ ಕ್ರಮವಲ್ಲದೆ ಹಲವಾರು ಕ್ರಮಗಳುಳ್ಳ ಸ್ವರಶ್ರೇಣಿಯ ಸ್ವರಗಳೂ ಬಹಳ ಸಾಮ್ಯಉಳ್ಳವು. ಪ್ರಮುಖವಾದ ಮತ್ತೆರಡು ಸ್ವರಶ್ರೇಣಿಗಳೆಂದರೆ ಕುಮಾಯ್ ಅಥವಾ ಐಪ್‍ಮೋಡ್ ಮತ್ತು ಯಿವಾಟೋ ಅಥವಾ ಡಿ ಮೋಡ್. ಕೋಟೋ ವಾದ್ಯದಲ್ಲಿ ಬೇರೆ ಬೇರೆ ಸ್ಪರಶ್ರೇಣಿಗಳನ್ನು ಆಯ್ದುಕೊಳ್ಳುವಾಗ ಅವಕ್ಕೆ ಬೇಕಾದ ತೀವ್ರ ಮತ್ತು ಕೋಮಲ ಸ್ವರಗಳನ್ನು ಕುದುರೆಗಳನ್ನು ಜರುಗಿಸುವುದರ ಮೂಲಕ ಶ್ರತಿಗೆ ಹೊಂದಿಸುತ್ತಾರೆ. ಈ ರೀತಿ ವಿವಿಧ ರೀತಿಯ ಕಂಪನಾವರ್ತ ಸಂಖ್ಯೆಗಳನ್ನು ಉಂಟು ಮಾಡಿ ನಾದವೈವಿಧ್ಯವನ್ನು ಪಡೆಯಬಹುದು. ಕೋಟೋ ವಾದ್ಯ ಚೀನದ ಪ್ರಮುಖ ವಾದ್ಯವಾದ ಚಿನ್‍ಜಿûತರ್ ವಾದ್ಯವನ್ನೇ ಹೋಲುತ್ತದೆ. ಜಪಾನೀ ಸಂಗೀತದಲ್ಲಿ ಸ್ವರಸಾಂಗತ್ಯ ಮತ್ತು ಧ್ವನಿಗುಣವೇ ಪ್ರಮುಖವಾದ ಅಂಶಗಳು.

	ರಾಜಾಸ್ಥಾನದಲ್ಲಿ ನೆಲೆಸಿದಸಂಗೀತವನ್ನು ಮನೋರಂಜನೆಯನ್ನೇ ಮುಖ್ಯಧ್ಯೇಯವನ್ನಾಗಿಟ್ಟುಕೊಂಡು ಆಗಾಗ ಪರಿಷ್ಕರಿಸಲಾಯಿತು. ಹಲವಾರು ವಾದ್ಯಗಳನ್ನು ಪರಿವರ್ತನೆಗೊಳಿಸಿ, ಮತ್ತೆ ಹಲವಾರು ವಾದ್ಯಗಳನ್ನು ಹೊಸದಾಗಿ ಸೃಷ್ಟಿಸಿದರು. ಅವುಗಳಲ್ಲಿ ಸೆಮಿಸಾನ್ ವಾದ್ಯ ಬಹು ಮುಖ್ಯವಾದುದು. ಇವುಗಳಲ್ಲಿ ಹಲವನ್ನು ಜಪಾನಿನ ವೇದಿಕೆಯ ಮೇಲೆ ನಡೆಯುವ ನರ್ತನ ಮತ್ತು ನಾಟಕಗಳಲ್ಲಿ ಸಂಗೀತವನ್ನೊದಗಿಸುವುದಕ್ಕಾಗಿ ಬಳಸುತ್ತಿದ್ದರು. ತರುಣದಲ್ಲಿ ವಾದ್ಯಮೇಳಗಳಲ್ಲಿ ಪಾಲ್ಗೊಳ್ಳುತ್ತಿದ್ದ ಈ ವಾದ್ಯ ರಂಗಮಂಟಪದ ಸಂಗೀತದ ನಡೆಗೆ ಸರಿಹೊಂದಿ ಅಲ್ಲಿಯ ಸಂಗೀತಕ್ಕೆ ಪ್ರಧಾನವಾದ ವಾದ್ಯವಾಯಿತು. ಸೆಮಿಸಾನ್ ವಾದ್ಯ ಮೊಗೆ ಗುದ್ದಲಿಯಾಕಾರದಲ್ಲಿದ್ದು ಮೂರು ತಂತಿಗಳನ್ನು ಹೊಂದಿದೆ. ಅದರಲ್ಲಿ ಉದ್ದವಾದ ಕುತ್ತಿಗೆ ಹಾಗೂ ಚಚ್ಚೌಕವಾದ ಅನುರಣಕವಿರುತ್ತವೆ. ಈ ವಾದ್ಯದ ಎದೆ ಹಲಗೆಯನ್ನು ಬೆಕ್ಕಿನ ಧರ್ಮದಿಂದ ಮುಚ್ಚಿರುತ್ತಾರೆ. ಮೆಟ್ಟಲುಗಳಿಲ್ಲದ ಇದನ್ನು ನುಡಿಸುವಾಗ ಕೊಡಲಿಯಾಕಾರದ ಸ್ವಲ್ಪ ದೊಡ್ಡದಾದ ಕೋನದಿಂದ ತಂತಿಗಳನ್ನು ತಾಡಿಸುತ್ತಾರೆ. ಕೋಕ್‍ಯೂ ಎಂಬ ಮತ್ತೊಂದು ವಾದ್ಯ ಸೆಮಿಸಾನ್ ವಾದ್ಯವನ್ನೆ ಹೋಲುತ್ತಿದ್ದು ನಾಲ್ಕು ತಂತಿಗಳನ್ನು ಹೊಂದಿದೆ. ಹಿಚಿರಿಕಿ ಎಂಬ ಮತ್ತೊಂದು ವಾದ್ಯ ಎರಡು ಜೊಂಡುಗಳನ್ನು ಪೀಪಿಯಂತೆ ಮಾಡಿ ಸೇರಿಸಿರುವ ವಾದ್ಯಗಳ ವರ್ಗಕ್ಕೆ ಸೇರಿದುದು. ಬಾಯಿಂದ ಪೀಪಿಗೆ ಉಸಿರು ಪ್ರಸಾರವಾದಾಗ ಗಾಳಿಯ ಒತ್ತಡದಿಂದ ಗುಂಭವಾದ ನಾದ ಉತ್ಪತ್ತಿಯಾಗುತ್ತದೆ. ಈ ನಾದಕ್ಕೆ ಕರುಣರಸವನ್ನು ಉದ್ರೇಕಿಸುವ ಗುಣವಿದೆ.

	ಈಚೀಚೆಗೆ ಜಪಾನೀಯ ವಾಗ್ಗೇಯಕಾರರೂ ಇತರ ಪಾಶ್ಚಾತ್ಯ ದೇಶಗಳ ಪ್ರಭಾವದಿಂದ ಅತ್ಯಾಧುನಿಕ ಸಂಗೀತವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹಾಗೂ ಜಾeóï ಮತ್ತು ಪಾಪ್ ಸಂಗೀತವನ್ನೂ ರೂಢಿಗೆ ತರುತ್ತಿದ್ದಾರೆ. ಹಲವಾರು ಹೊಸ ಪ್ರಕಾರಗಳನ್ನು ರಚಿಸಿ ಅವನ್ನು ಪಾಶ್ಚಾತ್ಯ ಸಂಗೀತ ಮತ್ತು ವಾದ್ಯಮೇಳಗಳಿಗಾಗಿ ಹಲವಾರು ರಚನೆಗಳನ್ನು ರಚಿಸುತ್ತಿದ್ದಾರೆ. ಆಧುನಿಕ ವಾಗ್ಗೇಯಕಾರನಾದ ಬುನ್‍ಯೋಕೋಲನ ರಚನೆಗಳು ಪ್ರಖ್ಯಾತ ಪಾಶ್ಚಾತ್ಯ ವಾಗ್ಗೇಯಕಾರರಾದ ಬಾರ್‍ಟಕ್ ಮತ್ತು ಷ್ಚುಯಂಬರ್ಗ್ ಮುಂತಾದವರ ರಚನೆಗಳನ್ನೇ ಹೋಲುತ್ತವೆ. ಶಕುಹಚಿ ಎಂಬುದು ಮತ್ತೊಂದು ಸುಶಿರ ವಾದ್ಯ, ಇದನ್ನು ನುಡಿಸುವಾಗ ಎರಡು ತುಟಿಗಳನ್ನೂ ಮುಚ್ಚಿ ಮಧ್ಯೆ ಒಂದು ಸಣ್ಣ ತೂತನ್ನು ಮಾಡಿಕೊಂಡು ಅದರ ಮೂಲಕ ನಾದೋತ್ಪತ್ತಿಯನ್ನುಂಟುಮಾಡಬೇಕು.

	ಜಪಾನೀಯರ ರಾಜಾಸ್ಥಾನದ ಸಂಗೀತಕ್ಕೆ ತೋಗಾಕು ಎಂದು ಹೆಸರು. ಈ ಸಂಗೀತದಲ್ಲಿ ನಾದವೈವಿಧ್ಯಕ್ಕಾಗಿ ಟ್ರಂಪೆಟ್ ಎಂಬ ಅವನದ್ಧ ವಾದ್ಯವನ್ನೂ ಇ.ಪ್ಲಾಟ್ ಕ್ಲಾರಿನೆಟ್ ವಾದ್ಯವನ್ನೂ ರ್ಯುತೇಕಿ ಎಂಬ ವೇಣುವಾದ್ಯವನ್ನೂ ಹಿಚಿರಿಕಿ ಮುಂತಾದ ವಾದ್ಯಗಳನ್ನೂ ಬಳಸುತ್ತಿದ್ದರು. ಪಿಕಲೊ ಮತ್ತು ಬಿ.ಪ್ಲಾಟ್‍ಕ್ಲಾರಿನೆಟ್ ವಾದ್ಯ ಉಚ್ಚಸ್ಥಾಯಿಯ ಶಬ್ಛಗಾಂಭಿರ್ಯವನ್ನು ನುಡಿಸುತ್ತಿದ್ದರೆ ಷೋ ಮತ್ತು ಟ್ರಂಬೋನ್ ವಾದ್ಯಗಳು ತಗ್ಗು ಸ್ಥಾಯಿಯಲ್ಲಿ ತುಂಬುನಾದವನ್ನು ಹೊಮ್ಮಿಸುತ್ತವೆ. ಲಯವಾದ್ಯಗಳ ಕೂಡುವಿಕೆಯಿಂದ ತೋಗಾಕು ಸಂಗೀತಕ್ಕೆ ಉತ್ತಮ ಸ್ಥಾನ ಸಿಕ್ಕಿತು. ಪ್ರತಿಯೊಂದು ವಾದ್ಯವೂ ತನ್ನದೇ ಆದ ವೈಶಿಷ್ಟ್ಯ, ನಾದಗುಣ, ನಾದವ್ಯಾಪ್ತಿಯನ್ನು ಪಡೆದಿರುತ್ತದೆ. ಜಪಾನೀಯರ ಕಲೆಗಳಲ್ಲಿ ಸರ್ವ ಸಾಮಾನ್ಯವಾಗಿ ಪಾಶ್ಚಾತ್ಯ ಪ್ರಭಾವ ಹೆಚ್ಚಾಗಿದ್ದು ಸಂಗೀತದಲ್ಲಿ ಅತ್ಯುತ್ಕøಷ್ಟವಾದ ಸಿಂಪೋನಿ ವಾದ್ಯಮೇಳ, ಜಾeóï, ರಾಕ್ ಅಂಡ್ ರೋಲ್ ಸಂಗೀತ ಬೆಳೆಯುತ್ತಿವೆ.
(ಎಂ.ವಿ.ಆರ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ